Tuesday, May 14, 2013



ಸಾದಾ ಸಿಂಪಲ್ ಸಾಲುಗಳು...

ಇವು ಚರಣಗಳೂ ಅಲ್ಲ ಪಲ್ಲವಿಯೂ ಅಲ್ಲ..
ಹೆಚ್ಚುಕಮ್ಮಿ ತಲೆಯೂ ಇಲ್ಲ ಬುಡವೂ ಇಲ್ಲ
ಬಾಯಿಗ್ ಬಂದಿದ್ ಮಾತಾಡೊ ಬದಲು
ಬರ್ದಿಡೊ ಖಯಾಲಿ...



ಸಿಟ್ಟುಬಂದಾಗಲೇ ನೆನಪಾಗುವುದ್ಯಾಕೆ?
ಮೂಟೆಗಟ್ಟಲೆ ಪ್ರೀತಿಕೊಟ್ಟ
ಕೋಟಿಗಟ್ಟಲೆ ಮುತ್ತನಿಟ್ಟ
ಸಣ್ಣಪುಟ್ಟ ಸಂತೋಷಗಳು.



Saturday, May 11, 2013

ಹೃದಯ ಮಾಗಿದರೂ ಮನಸಿನ್ನೂ ಎಳಸು.




ನನ್ನವಳು ಅವಳೇ ಅದರಲ್ಲಿ ಅನುಮಾನವೇ ಇಲ್ಲ. ಆದರೆ ಇವಳೂ ಕಾಡುವಳಲ್ಲ. ಪ್ರಾಯ ಬಂದಾಗಿನಿಂದ ಬಯಸಿ ಹಂಬಲಿಸಿದ ಪ್ರೀತಿ ಅಸಹಜವಾದ ಸಮಯದಲ್ಲಿ ಬಂದೊದಗಿತು. ಹಿಂದುಮುಂದು ನೋಡದೆ ಒಪ್ಪಿಕೊಂಡೆ. ಜೀವನದಲ್ಲಿ ಮಾಡಿದ ಒಂದೇ ಒಂದು ಒಳ್ಳೆಕೆಲಸವೆಂದರೆ ಅದೇ. ಬಹುಷಃ ಇಂಥ ಪ್ರೀತಿ ಹುಡುಕಿದರೂ ಸಿಗಲಿಕ್ಕಿಲ್ಲವೇನೋ..

      ನಾನೊ ಹುಟ್ಟುಸಂಬೇರಿ. ಪಾಪ ಅವಳು. ದಿನಕ್ಕೊಂದೂ call ಇರುತ್ತಿರಲಿಲ್ಲ. ಒಮ್ಮೊಮ್ಮೆ ಎರಡುಮೂರು ದಿನದವರೆಗೂ message ಮಾಡದೆ ಕಳೆದಿದ್ದಿದೆ. ಆದರೆ ಎಂದೂ ತಕರಾರು ತೆಗೆದವಳಲ್ಲ. ಸೊಕಾಸುಮ್ಮನೆ ಎಂದೂ ಜಗಳವಾಡಿಲ್ಲ. ಕೋಪಮಾಡಿಲ್ಲ. ಮೊಬೈಲ್ ಎಂಬ ಮಾಯಾವಿ ಈಕಾಲದಲ್ಲಿ ವಿಪರೀತ ಚೇಷ್ಟೆ ಮಾಡುತ್ತಿದ್ದರೂ ಆ ಚೇಷ್ಟೆಗೆ ಸೊಪ್ಪುಹಾಕಲಿಲ್ಲ. ಇನ್ನೊಬ್ಬರಿಗೆ ನನ್ನ ಹೋಲಿಸಿ ಎಂದೂ ಪ್ರಶ್ನಿಸಲಿಲ್ಲ. ಸುಮ್ಮನೆ ಕಣ್ಮುಚ್ಚಿ ಪ್ರೀತಿಸಿದಳು. ಆ ಪ್ರೀತಿಗೆ ನಾನು ಕೊಸರದೇ ಸೋತಿದ್ದೇನೆ. 

     ಆದರೆ ಮನಸೇಕೆ ಎಳಸುಎಳಸಾಗಿ ವರ್ತಿಸುವುದೋ ನಾಕಾಣೆ. ಕಳ್ಳಮನಸು  ಚಂದನೆಯ ಹಡುಗಿಯನ್ನ ಪದೇಪದೇ ನೋಡುವಂತೆ ಕಣ್ಣಿಗೆ contract ಕೊಡುತ್ತಲೇ ಇದೆ. ಗೆಳತಿಯರ ಹೊಸಭಾವಚಿತ್ರಗಳು ಮನಸನ್ನ ಈಗಲೂ  ವಿಚಲಿತಗೊಳಿಸುತ್ತಿವೆ. ಆಕರ್ಷಣೆಯ ವಯಸ್ಸಿನ crush ಗಳು ಮುಂದುವರೆದಿದ್ದರೆ ಎಂಬ ಆಸೆಗಳು ಆಗಾಗ ಬರುವುದುಂಟು.ಯಾಕಿಂತ ಬಲಹೀನತೆಯೆಂಬುದೇ ಬಗೆಹರಿಯದ ಪ್ರಶ್ನೆ.

     ಎಲ್ಲರಿಗೂ ಪ್ರೀತಿಸುವ ಮುನ್ನ ಪ್ರೀತಿಯೆಡೆಗೊಂದು ಅಪರಿಚಿತ ಮೋಹ ಮತ್ತು ಪೂರ್ವಕಲ್ಪನೆಯಿರುವುದು ಸಹಜ.ಆದರೆ ಆ ಕಲ್ಪನೆಗೆ ತಕ್ಕುದಾದ ಪ್ರೀತಿಯೇ ಸಿಗಬೇಕೆಂದೇನಿಲ್ಲ. ದುರದೃಷ್ಟವಶಾತ್ ಹಾಗೆ ಸಿಗುವುದೂ ಅಪರೂಪ. ಸಮಯಕಳೆದಂತೆ ನಾವು ಪ್ರೀತಿಸಿದವರಲ್ಲೇ ನಮ್ಮ ಕಲ್ಪನೆಯನ್ನ ಬಯಸುತ್ತೇವೆ. ಕಲ್ಪನೆಗೆ ಸರಿಹೊಂದದಿದ್ದಾಗ ಅದನ್ನೇ ತೊಡಕೆಂದು ಎತ್ತಿಹಿಡಿಯುತ್ತೇವೆ. ಆಗಲೇ ಅಂತರಗಳು ಬೆಳೆಯುವುದು. ಅವೇ ಮುಂದೆ ಸಮಸ್ಯೆಯಾಗಿ ಬದಲಾಗುವುದು. 

     ನನ್ನವಳ ನಾನೊಪ್ಪಿಕೊಂಡೆ. ಆಗ ಪ್ರೀತಿಯೆಡೆಗಿನ ಕಲ್ಪನೆಯಾಗಲೀ, ಅಭಿರುಚಿಯ ಸಮಾನ ಸಾಮ್ಯತೆಯನ್ನಾಗಲೀ ನಾನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಈಗ ಅವಳು ಹೀಗಿರಬಹುದಿತ್ತು ಹಾಗಿರಬಹುದಿತ್ತು ಎಂಬ ಆಗ್ರಹಗಳು ನನ್ನನ್ನ ಕಾಡುತ್ತಿವೆ. 

     ನಿನ್ನೆಯವಳು ಕರೆಮಾಡಿದಾಗ ಬಹಳದಿನದಿಂದ ಮನಸ್ಸನ್ನ ಹಿಂಸಿಸುತ್ತಿದ್ದ ಗೊಂದಲಗಳು ಮುಗಿದುಹೋದವು. ಸುಮ್ಮನೇ ಹರಟುತ್ತಿದ್ದಾಗ ಇಂಥದೇ ಕೆಲವು ಆಗ್ರಹಗಳನ್ನ ಅವಳಮುಂದಿಟ್ಟೆ. ಅವಳದನ್ನ ತಿರಸ್ಕರಿಸಲಿಲ್ಲ. ಹಾಗಂತ ಒಪ್ಪಿಕೊಳ್ಳಲೂ ಇಲ್ಲ. 
ಬದಲಾಗಿ ಒಂದು ಮಾತು ಹೇಳಿದಳು. " ನೀನು ನನ್ನನ್ನ ಪ್ರೀತಿಸುವಂತೆ ಒಪ್ಪಿಸುವಾಗ ನೀನು ಹೇಗಿರುವೆಯೋ ಹಾಗೆಯೇ ಒಪ್ಪಿಕೊಳ್ಳುವುದಾಗಿ ಹೇಳಿದ್ದೆ. ಆದರೆ ಈಗೇಕೆ ಇಂಥ ಬದಲಾವಣೆ ಬಯಸುವುದ್ಯಾಕೆ? ನಾನು ನಿನ್ನನ್ನ ಮದುವೆಯಾದಮೇಲೆ ಕೇವಲ ನಿನ್ನನ್ನಲ್ಲ, ನಿನ್ನ ಮನೆಯ ಸಮಾಜದ ಸ್ನೇಹಸಂಬಧಿಗಳ ಸಂಸ್ಕಾರ, ವಾತಾವರಣ,ಪರಿಸ್ಥಿತಿಗಳನ್ನೆಲ್ಲ ಒಪ್ಪಿಕೊಳ್ಳಲು ತಯಾರಾಗಿಯೇ ನಿನ್ನ ಪ್ರೀತಿಯನ್ನ ಒಪ್ಪಿದ್ದು. ಸ್ವಭಾವ ಸಹಜ ಕುಂದುಕೊರತೆಗಳು ನನ್ನಲ್ಲಿಯೂ ಇವೆ. ಹಾಗಿರುವಾಗ ಅಷ್ಟುಮಾತ್ರವನ್ನ ನೀನೇಕೆ ಒಪ್ಪಿಕೊಳ್ಳಬಾರದು ". ಒಮ್ಮೆ ತಡೆದು ಮತ್ತೆ ಮುಂದುವರೆಸಿದಳು " ನೋಡು, ನನಗೆ ನಿನ್ನ ಪ್ರೀತಿ ಬೇಕೇಬೇಕು. ನಾನು ದಡ್ಡಿ. ಎಲ್ಲರಂತಿಲ್ಲ ನಿಜ. ಹೇಗೆ ಏನು ಯಾವುದು ಸರಿ ಯಾವುದು ತಪ್ಪು ಎಂದು ಅರಿಯುವುದು ಕಡಿಮೆಯೇ. ಎಲ್ಲದಕ್ಕಿಂತ ಹೆಚ್ಚು ನಿನ್ನನ್ನ ಪ್ರೀತಿಸುವುದನ್ನ ಬಿಟ್ಟು ನನಗಿನ್ನೇನೂ ಗೊತ್ತಿಲ್ಲ ಕಣೊ."

     ಮುಂದೆ ಅವಳೇನನ್ನೂ ಹೇಳಲಿಲ್ಲ. ನಾನೂ ಏನನ್ನೂ ಕೇಳಲಿಲ್ಲ. ನನ್ನಲ್ಲಿ ಗೊಂದಲಮುಗಿದಿತ್ತು, ಆ ಪರಿಸ್ಥಿತಿಯಲ್ಲಿ ಮಾತು ಸೋತಿತ್ತು. ಎಳಸು ಮನಸು ಮಾಗುವ ಲಕ್ಷಣವೋ ಏನೊ ಹೃದಯ ಮತ್ತಷ್ಟು ಬಿಗಿಯಾಗಿ ಕಂಗಳಲಿ ತೇವ ಜಿನುಗಿತ್ತು.






ಪ್ರೀತಿದಿನದ ಹಿಂದೆ ಬರೆದ ಗೆಳೆಯನ ಒಲವ ಓಲೆ.




ಸುಮ್ಮನೆ ಪ್ರೀತಿದಿನಕ್ಕೆ ಜೈ ಎಂದು ಘೋಷಿಸಿ.......,


ಅದೆಷ್ಟು ಯೋಚಿಸಿದರೂ ಬರುವ ಭಾಷೆಯನ್ನೆಲ್ಲ ಒಟ್ಟುಮಾಡಿ ಮನಸ್ಸನ್ನ ಸಾಧ್ಯವಾದಷ್ಟು ನಿಯಂತ್ರಿಸಿ ಪೆನ್ನು ಕಾಗದದಮೇಲಿಟ್ಟರೂ ಅವಳಮೇಲಾಗಲೀ ಅವಳುಕೊಟ್ಟ ಅಗಾಧ ಪ್ರೀತಿಬಗ್ಗಾಗಲೀ ಸಮನಾದ ವಾಕ್ಯವನ್ನ ಬರೆಯಲಾಗಲಿಲ್ಲ. 
          
           ಎದೆಯಲ್ಲಿ ಅದೆಷ್ಟು ಪ್ರೀತಿಯಿದೆಯೋ ಅದಕ್ಕಳತೆಯಿಲ್ಲ. ಅಳತೆ ಬೇಕಾಗೂ ಇಲ್ಲ. ಭಾವ ಭಾಷೆಯಾಗಿ ಹೊರಬರುವಾಗೆಲ್ಲಮನದಾಳದ ಅವ್ಯಕ್ತ ಅನಂತ ಅನಿಸಿಕೆಗಳೆಲ್ಲ ಒಂದೇಸಮನೆ ಸರದಿಯಲ್ಲಿ ಹರಿದುಬಂದುಬಿಟ್ಟಿದ್ದರೆ, ಅವಳಿಗೆ ಕಣ್ಣುಮುಚ್ಚಿ ಕೂರಲುಹೇಳಿ ಅವಳ ಮಡಿಲತುಂಬ ಪ್ರೀತಿಯ ಹುಯ್ದು ಹಗುರಾಗಿಬಿಡಬಹುದಿತ್ತು. ನಾಳೆಗೆ ಸರಿಯಾಗಿ ಅಧಿಕೃತವಾಗಿ ಪ್ರೀತಿಯೆಂಬ ಮುದ್ದಾದ ಮಗು ಹುಟ್ಟಿ ಮೂರುವರ್ಷವಾಯ್ತು. ಇಂದು ಅವಳು ಜೊತೆಯಲ್ಲಿಲ್ಲ. ಬಹುಷಃ ನನ್ನದೇ ನೆನಪಲ್ಲಿ ಅದ್ಯಾವುದೋ ಕಾರ್ಯಕ್ರಮದಲ್ಲಿ ಓಡಾಡಿಕೊಂಡಿದ್ದಾಳೆ.ಪಾಪ ಅದೆಷ್ಟು ಅಲವತ್ತುಕೊಂಡಳೋ, ಅಂತರಂಗದಲ್ಲಿ ನೆನಪು ಅದೆಷ್ಟು ನರಳಾಡಿತೊ, ವಿನಾಕಾರಣ ಪ್ರೀತಿಯೆಂಬ ಪುಟ್ಟಕಂದ ತಾಯಿಯಾದ ಅವಳನ್ನ ರಚ್ಚೆಹಿಡಿದುಕಾಡಿ ನಿದ್ದೆಕೆಡಿಸಿತೇನೊ..

           ಅವಳಿದ್ದಿದ್ದರೆ ಮಾಡುವುದು ಏನೂ ಇರಲಿಲ್ಲ. ಮತ್ತೆ ಹುಟ್ಟುಹಬ್ಬದ ನಲುಮೆಯ ನೆನಪುಗಳ ಪುಟಮೆಲುಕುತ್ತಿದ್ದೆವು. ಇತಿಹಾಸದಲ್ಲೇ ಕರಗಿ ಕಣ್ಣಲ್ಲಿ ತೇವಜಿನುಗುತ್ತಿತ್ತೇನೊ. ಹತ್ತಿಕ್ಕಲಾಗದ ಅದಮ್ಯ ಒಲವಿನ ವಿಜೃಂಭಿಸುವ ವಿನೋದವು ತುಟಿಯಲ್ಲಿ ನಲಿದು ಮುತ್ತಾಗಿ ಮಾರ್ಪಟ್ಟು ಕೆನ್ನೆಯದಿನ್ನೆಯಲ್ಲಿ ನವೋದಯದ ರಂಗು ತುಂಬುತ್ತಿತ್ತು. ಮನಸು ಮುಂದಿನ ಮೂವತ್ತು ವರ್ಷಗಳಾಚೆಗೆ ಕನಸ ಹೊಸೆದು ಹೊಸಗುರಿಯೊಂದನ್ನ ಹೆಣೆಯುತ್ತಿತ್ತು. 

           ನಿಜಕು ಅವಳು ಜೊತೆಯಲ್ಲಿದ್ದಿದ್ದರೆ ಚಂದವಿತ್ತು. ಇರದಿದ್ದರೇನಂತೆ, ಇರಬಹುದಿತ್ತು ಇದ್ದಿದ್ದರೆ ಹೀಗೆ ಹಾಗೆ ಎಂಬ ಕಲ್ಪನೆಯೂ ಮುದ್ದಾಗಿದೆ. ಅವಳಷ್ಟೆ ಚಂದವಿದೆ. ಇಂದು ಜಗತ್ತಿನಾದ್ಯಂತ ಇಂಥದೇ ಮಿಡಿತಗಳ ಅಪರಿಮಿತ ಹುಯ್ದಾಟವಿದೆ. ಪ್ರೀತಿಯಲ್ಲಿನ ಬದುಕು ನಿಜಕು ಸುಂದರವಾಗಿದೆ. ಖುಷಿಯಲ್ಲಿರಲು ಇಷ್ಟೇ ಸಾಕಾಗಿದೆ.